ಕೂಡ್ಲಿಗಿ
ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹೊಸಪೇಟೆ ಉಪವಿಭಾಗಕ್ಕೆ ಸೇರಿದ ಅತ್ಯಂತ ದೊಡ್ಡ ತಾಲ್ಲೂಕು. ಉತ್ತರದಲ್ಲಿ ಹಡಗಲಿ ಮತ್ತು ಸಂಡೂರು ತಾಲ್ಲೂಕುಗಳೂ ಪೂರ್ವ ದಕ್ಷಿಣಗಳಲ್ಲಿ ಚಿತ್ರದುರ್ಗ ಜಿಲ್ಲೆಯೂ ಪಶ್ಚಿಮದಲ್ಲಿ ಹರಪನಹಳ್ಳಿ ತಾಲ್ಲೂಕೂ ಇವೆ. ಸ್ಥೂಲವಾಗಿ ಪೂ.ರೇ. 76ಲಿ25'-76ಲಿ 85' ಮತ್ತು ಉ.14ಲಿ33`-15ಲಿ4' ನಡುವೆ ಈ ತಾಲ್ಲೂಕು ಹರಡಿದೆ. ವಿಸ್ತೀರ್ಣ 703 ಚ.ಮೈ. ಈ ತಾಲ್ಲೂಕಿನ ಗ್ರಾಮಗಳ ಸಂಖ್ಯೆ 93. 1891ರಲ್ಲಿ ಈ ತಾಲ್ಲೂಕಿನ ಜನಸಂಖ್ಯೆ 94,296 ಇದ್ದುದ್ದು 1901ರಲ್ಲಿ 1,03,985ಕ್ಕೆ ಏರಿ, 1951ರಲ್ಲಿ 1,08,462 ಆಗಿತ್ತು. ಈ ತಾಲ್ಲೂಕಿನ ಜನಸಂಖ್ಯೆ 2,71,890 (2001) ಹಾಗೂ ಪಟ್ಟಣದ ಜನಸಂಖ್ಯೆ 21,855.

	ಮೌರ್ಯರು (ಅಶೋಕ), ಸಾತವಾಹನರು, ಪಲ್ಲವರು, ಕದಂಬರು ಮತ್ತು ಚಾಳುಕ್ಯರು ಈ ತಾಲ್ಲೂಕನ್ನು ಆಳಿದರು. ರಾಷ್ಟ್ರಕೂಟರ ಕಾಲದಲ್ಲಿ ಇದು ಅವರ ಸಾಮಂತರಾಗಿದ್ದ ಗಂಗರ ಆಳ್ವಿಕೆಗೆ ಒಳಪಟ್ಟಿತ್ತು. ವಿಜಯನಗರದ ಅರಸರ ಕಾಲ ಈ ತಾಲ್ಲೂಕಿನ ಇತಿಹಾಸದ ಸ್ವರ್ಣಯುಗವಾಗಿತ್ತು. ಆ ಸಾಮ್ರಾಜ್ಯ ಕಣ್ಮರೆಯಾದ ಮೇಲೆ ಈ ಪ್ರದೇಶ ಹೈದರ್ ಆಲಿ ಮತ್ತು ಟಿಪ್ಪೂ ಆಳ್ವಿಕೆಗೆ ಸೇರಿತು. ಟಿಪ್ಪೂವಿನ ಪತನದ ಅನಂತರ ಇದು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು, ಮದ್ರಾಸ್ ಅಧಿಪತ್ಯದಲ್ಲಿ ಸೇರಿತು. ಸ್ವಾತಂತ್ರ್ಯಾನಂತರ 1953ರ ಅಕ್ಟೋಬರ್‍ನಲ್ಲಿ ಬಳ್ಳಾರಿ ಜಿಲ್ಲೆಯೊಂದಿಗೆ ಮೈಸೂರು ರಾಜ್ಯಕ್ಕೆ ಸೇರಿತು.

	ಕೂಡ್ಲಿಗಿ ತಾಲ್ಲೂಕು ದಖನಿನ ಉತ್ತರದ ಇಳಿಜಾರಿನಲ್ಲಿದೆ; 2,000'-1,500' ಎತ್ತರದಲ್ಲಿ ಈಶಾನ್ಯದ ಕಡೆಗೆ ಇಳಿಜಾರಾಗಿದೆ. ಪೂರ್ವದ ಅಂಚಿನಲ್ಲಿ ಸಂಡೂರು ಪರ್ವತಗಳ ಸ್ವಲ್ಪ ಭಾಗವುಂಟು. ತಾಲ್ಲೂಕಿನ ಮಧ್ಯದಲ್ಲೂ ಅನೇಕ ಸಣ್ಣ ಬೆಟ್ಟಗಳಿವೆ. ಉಳಿದ ಪ್ರದೇಶ ಸಾಮಾನ್ಯವಾಗಿ ಪ್ರಸ್ಥಭೂಮಿ.

	ತುಂಗಭದ್ರೆಯ ಉಪನದಿಯಾದ ಚಿಕ್ಕಹಗರಿ ನದಿ ಈ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹರಿಯುತ್ತದೆ. ಆಗ್ನೇಯ ಭಾಗದಲ್ಲಿ ತಾಲ್ಲೂಕು ಮೇರೆಯ ವರೆಗೆ ಹರಿಯವ ನದಿ ಚಿನ್ನಹಗರಿ(ಜಿಗಣಿ ಹಳ್ಳ). ಇವು ವಿಶಾಲವಾದ ಆದರೆ ಆಳವಿಲ್ಲದ ನದಿಗಳು. ನದೀಪಾತ್ರಗಳ ಮರಳು ದಡಗಳಲ್ಲಿ ಹರಡಿದೆ. ವರ್ಷದಲ್ಲಿ ಹೆಚ್ಚು ಕಾಲ ಈ ನದಿಗಳು ಒಣಗಿರುತ್ತವೆ.

	ಇತಿಹಾಸದ ಅತ್ಯಂತ ಪ್ರಾಚಿನ ಶಿಲೆಗಳು ಇಲ್ಲುಂಟು. ಪಶ್ಚಿಮಾರ್ಧದಲ್ಲಿರುವವು ಧಾರವಾಡ ಪದರಶಿಲೆಗಳು. ಇವು ಒಂದರ ಮೇಲೊಂದರಂತೆ ನಾಲ್ಕು ಪದರಗಳಾಗಿ ಹರಡಿವೆ. ಪೂರ್ವಾರ್ಧದಲ್ಲಿ ಪರ್ಯಾಯದ್ವೀಪೀಯ ಪದರ ಶಿಲೆಗಳಿವೆ. ಆಗ್ನೇಯದ ಸ್ವಲ್ಪ ಭಾಗದಲ್ಲಿ ಮಾತ್ರ ಬೆಣಚುಕಲ್ಲುಂಟು.

	ಇಲ್ಲಿಯದು ಕೆಂಪು ಮತ್ತು ಬಿಳಿ ಕೆಂಪು ಮಿಶ್ರವಾದ ಮಣ್ಣು. ಗ್ರಾನೈಟಿನ ಪೃಥಕ್ಕರಣದಿಂದುಂಟಾದ ಈ ಮಣ್ಣು ಎರೆ ಮತ್ತು ಮರಳಿನ ರೂಪದಲ್ಲಿದೆ. ಇದು ಮಸಾರೆ ನೆಲವೂ ಹೌದು. ಕೊಟ್ಟೂರಿನ ಸುತ್ತಮುತ್ತ ಇರುವುದು ಕರಿಕಲ್ಮಣ್ಣು. ತಾಲ್ಲೂಕಿನ ⅔ ಭಾಗದಲ್ಲಿ ಕೆಂಪು ಮಣ್ಣೂ ⅓ ಭಾಗದಲ್ಲಿ ಮಿಶ್ರ ಮಣ್ಣೂ ಇವೆ.

	ಬಳ್ಳಾರಿ ಜಿಲ್ಲೆಯಲ್ಲಿ ಕೂಡ್ಲಿಗಿಯ ಪ್ರಾಕೃತಿಕ ಸೌಂದರ್ಯ ಅತಿಶಯವಾದ್ದು. ಉತ್ತರದಲ್ಲೂ ಪೂರ್ವಮಧ್ಯಗಳಲ್ಲೂ ಕಾಡುಗಳುಂಟು. ಇತ್ತೀಚೆಗೆ ಅವುಗಳಲ್ಲಿ ಕೆಲವನ್ನು ಕಡಿದು ವ್ಯವಸಾಯ ಭೂಮಿಯನ್ನಾಗಿ ಮಾಡಿದ್ದಾರೆ.  ಬೈರದೇವರ ಗುಡ್ಡವೇ ಮುಂತಾದ ಬೆಟ್ಟಗಳ ಸುತ್ತಮುತ್ತ ಪ್ರಸಿದ್ಧ ಅರಣ್ಯಗಳಿವೆ. ಹುಲ್ಲು ಮತ್ತು ಕುರುಚಲು ಗಿಡಗಳಿಂದ ಕೂಡಿದ ಪ್ರದೇಶಗಳುಂಟು. ಕಾಲುವೆಗಳ ಅಂಚುಗಳಲ್ಲಿ ಈ ಮರಗಳ ತೋಪುಗಳುಂಟು. ತಂಗಡಿ ಮತ್ತು ಹಂಗರಿಕೆ (ಡೊಡೋನಿಯ) ಸಸ್ಯಗಳ ಪೊದೆಗಳು ಎಲ್ಲೆಲ್ಲೂ ಕಾಣುತ್ತವೆ.  ಚಿರತೆಗಳು ಸಾಮಾನ್ಯ.

	ಇಲ್ಲಿಯ ವಾಯುಗುಣ ಶುಷ್ಕ. ಆದರೂ ಆರೋಗ್ಯಕರ.  ಅನೇಕ ಬೆಟ್ಟಗುಡ್ಡಗಳು ಮತ್ತು ಕೆರೆಗಳಿರುವುದರಿಂದ ಅಲ್ಲಲ್ಲಿ ಮಲೇರಿಯ ವ್ಯಾಧಿಯಿತ್ತು.   ಈಚೆಗೆ ಅದನ್ನು ನಿವಾರಿಸಲಾಗಿದೆ.  ವರ್ಷಪೂರ್ತಿ ಉಷ್ಣತೆ ಹೆಚ್ಚು. ಜೂನಿನಿಂದ ಅಕ್ಟೋಬರ್‍ವರೆಗೆ ಮುಂಗಾರು ಮಳೆಯೂ ಡಿಸೆಂಬರ್ ವರೆಗೆ ಹಿಂಗಾರು ಮಳೆಯೂ ಬೀಳುತ್ತವೆ. ವಾರ್ಷಿಕ ಮಳೆ 19"-22". ಅದೂ ಅನಿಶ್ಚಿತ. ಆದರೆ ಕೆಲವೊಮ್ಮೆ ಅತಿವೃಷ್ಟಿಯಾಗುವುದೂ ಉಂಟು.

	ಈ ತಾಲ್ಲೂಕಿನಲ್ಲಿ ನೀರಾವರಿ ಅನುಕೂಲಗಳು ಕಡಿಮೆ. ಇಲ್ಲಿ ಅನೇಕ ಕೆರೆ ಬಾವಿಗಳಿವೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೆರೆಗಳ ನಿರ್ಮಾಣಕ್ಕೆ ಗಮನ ಕೊಡಲಾಯಿತು. ಹಗರಿಬೊಮ್ಮನಹಳ್ಳಿಯ ಬಳಿ ಇರುವುದು ಜಿಲ್ಲೆಯ ಎರಡನೆಯ ದೊಡ್ಡ ಕಟ್ಟೆ. ಇದರಿಂದ ಉತ್ತರಭಾಗದ ತಾಲ್ಲೂಕುಗಳಿಗೆ ನೀರು ಒದಗುತ್ತದೆ. ತಾಲ್ಲೂಕಿನ ಮುಖ್ಯ ಕಸುಬು ಕೃಷಿ. ಜೋಳ, ಹರಳುಬೀಜ, ಹುಣಿಸೆಹಣ್ಣು- ಇವು ಈ ತಾಲ್ಲೂಕಿನ ಕೃಷಿ ಉತ್ಪನ್ನಗಳು. ಪಶುಪಾಲನೆ ಎರಡನೆಯ ಮುಖ್ಯ ಕಸಬು.  ಉದ್ದೆಳೆಯ ಉಣ್ಣೆ ಕೊಡುವ ಕುರಿಗಳನ್ನು ಹೆಚ್ಚಾಗಿ ಸಾಕುತ್ತಾರೆ; ಮರಗೆಲಸ, ಕಂಬಳಿ ಮತ್ತು ಜಮಖಾನೆ ನೇಯುವುದು. ಕೈಮಗ್ಗದ ಬಟ್ಟೆ ಮಾಡುವುದು, ಇತ್ಯಾದಿ ಗೃಹಕೈಗಾರಿಕೆಗಳಿವೆ. ಈ ತಾಲ್ಲೂಕಿನಲ್ಲಿರುವ ಬೈರದೇವರ ಗುಡ್ಡದಲ್ಲಿ ಗಂಧಕ ಹೇರಳವಾಗಿ ದೊರೆಯುತ್ತದೆಂದು ಹೇಳಲಾಗಿದೆ. ಈ ತಾಲ್ಲೂಕಿನಲ್ಲಿ ಆರು ಪ್ರೌಢಶಾಲೆಗಳಿವೆ. 1967ರಲ್ಲಿ ಕೊಟ್ಟೂರಿನಲ್ಲಿ ಒಂದು ಕಾಲೇಜು ಪ್ರಾರಂಭವಾಯಿತು. ಕೂಡ್ಲಿಗಿ, ಕೊಟ್ಟೂರು, ಹೊಸಹಳ್ಳಿ, ಮಾಳವಿ- ಇವು ತಾಲ್ಲೂಕಿನ ಮುಖ್ಯ ಊರುಗಳು.

	ಕೊಟ್ಟೂರು ವ್ಯಾಪಾರಕೇಂದ್ರ. ಇಲ್ಲಿಂದ ಹರಿಹರಕ್ಕೆ ರೈಲುಮಾರ್ಗ ನಿರ್ಮಿಸುವ ಯೋಜನೆ ಇದೆ. ಇಲ್ಲಿರುವ ಬಸವೇಶ್ವರ ದೇವಾಲಯಗಳು ಪ್ರೇಕ್ಷಣೀಯ. ಊರಿನ ಮಧ್ಯದಲ್ಲಿ ಕೊಟ್ರಬಸಪ್ಪನ ದೊಡ್ಡ ದೇವಾಲಯವಿದೆ. ಪ್ರತಿವರ್ಷ ಫೆಬ್ರವರಿಯಲ್ಲಿ ಗುರುಬಸವೇಶ್ವರ ಸ್ವಾಮಿಯ ಜಾತ್ರೆಯಾಗುತ್ತದೆ. ಇಲ್ಲಿಯ ಮುಖ್ಯ ಕಸಬು ನೇಯ್ಗೆ.  ಇದು ವ್ಯಾಪಾರ ಕೇಂದ್ರವೂ ಆಗಿದೆ.

	ಕೊಟ್ಟೂರಿಗೆ ದಕ್ಷಿಣದಲ್ಲಿ 9 ಮೈ. ದೂರದಲ್ಲಿ ಉಜ್ಜಯಿನಿಯಲ್ಲಿ ಶ್ರೀಮರುಳಸಿದ್ಧನ ದೇವಾಲಯವಿದೆ. ಇಲ್ಲಿಯ ಶಿಲ್ಪಕಲೆ ಪ್ರಸಿದ್ಧವಾದ್ದು. ಇಲ್ಲಿ ಪ್ರತಿ ವರ್ಷವೂ ಏಪ್ರಿಲಿನಲ್ಲಿ ಜಾತ್ರೆಯಾಗುತ್ತದೆ.

	ತಾಲ್ಲೂಕು ಕೇಂದ್ರ ಕೂಡ್ಲಿಗಿ. ಇದು ಸಂಚಾರ ಮಾರ್ಗಗಳ ಸಂಧಿಸ್ಥಳ. ತುಂಗಭದ್ರಾ ವಿದ್ಯುತ್ ಕೇಂದ್ರದಿಂದ ಬರುವ ವಿದ್ಯುತ್ತಿನ ಸ್ವೀಕಾರಕೇಂದ್ರ ಮತ್ತು ಉಪಕೇಂದ್ರಗಳಿವೆ. ಈ ಸಾಲು ಮುಂದೆ ದಾವಣಗೆರೆ, ಭದ್ರಾವತಿಗಳಿಗೆ ಹೋಗುತ್ತದೆ. ಇಲ್ಲಿ ನಿಯಂತ್ತಿತ ಉಪಮಾರುಕಟ್ಟೆ ಇದೆ.                                 				 (ಕೆ.ಆರ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ